ಭಾನುವಾರ, ಏಪ್ರಿಲ್ 28, 2024

ಬೆಂಗಳೂರು ನಗರದಲ್ಲಿ ಮತದಾನದ‌‌ ಪ್ರಮಾಣ ಕಡಿಮೆ ಏಕೆ?

ಮೇ 26, 2024ರಂದು ಲೋಕಸಭಾ ಚುನಾವಣೆಗೆ ಮತದಾನ ಆಯಿತು. ಕರ್‍ನಾಟಕದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಮೊದಲ ಹಂತದ ಮತದಾನ ನಡೆಯಿತು. ಬೆಂಗಳೂರು ನಗರದ ಮೂರು ಲೋಕಸಭಾ ಕ್ಷೇತ್ರಗಳಲ್ಲೂ ಸುಮಾರು ಶೇ.55 ರಷ್ಟು ಮತದಾನದ ಪ್ರಮಾಣ ವರದಿಯಾಗಿದೆ.

ಬೇರೆ ಕ್ಷೇತ್ರಗಳಿಗಿಂತ ಬೆಂಗಳೂರಲ್ಲಿ ಅದರಲ್ಲೂ ಬೆಂಗಳೂರು ನಗರದಲ್ಲಿ ಮತದಾನದ‌‌ ಪ್ರಮಾಣ ಕಡಿಮೆ ಅಂತ ಪ್ರತಿಬಾರಿಯೂ ಹೇಳ್ತಾರೆ. ಅದಕ್ಕೆ ಕಾರಣಗಳು ಹೀಗಿರಬಹುದು ಅಂತ ನನ್ನ ಅನಿಸಿಕೆ.

೧. ಮತದಾರರ ಪಟ್ಟಿ ಪರಿಷ್ಕರಣೆ ಆಗಿರುವುದಿಲ್ಲ. ನಗರ ಅಂದಮೇಲೆ ಜನ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಾಸಸ್ಥಳ ಬದಲಾಯಿಸುತ್ತಿರುತ್ತಾರೆ. ಬೇರೆ ಬೇರೆ ಊರುಗಳಿಂದ ಬಂದವರಿರುತ್ತಾರೆ, ಬೇರೆ ಊರುಗಳಿಗೆ ಹೋಗುವವರಿಗುತ್ತಾರೆ. ಬಹಳ ಜನ ತಾವು ಇರುವಲ್ಲಿ ಹೆಸರು ಸೇರಿಸಿದರೆ, ಹಿಂದಿನ ಪಟ್ಟಿಯಲ್ಲಿ ಹೆಸರು ತೆಗೆಸುವ ಗೋಜಿಗೆ ಹೋಗುವುದಿಲ್ಲ. ನಗರದ ಸುತ್ತಮುತ್ತಲಿನ ಊರಿನವರು ಅವರವರ ಊರಿಗೆ ಹೋಗಿ ಮತಚಲಾಯಿಸುತ್ತಾರೆ. ಬೆಂಗಳೂರಲ್ಲಿನ ಪಟ್ಟಿಯಲ್ಲೂ ಅವರ ಹೆಸರಿರುತ್ತದೆ. ನಿಧನರಾದವರ ಹೆಸರುಗಳೂ ಹಾಗೇ ಇರುತ್ತವೆ. ನಗರಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಬಹಳ ಶ್ರಮ, ಸಿಬ್ಬಂದಿ, ಸಮಯ ಬೇಕಿರುವುದರಿಂದ ಆ ಕೆಲಸ ಮಾಡುವುದಿಲ್ಲ. ಕೋಟಿಗಟ್ಟಲೇ ಮತದಾರರಿರುವ ಬೆಂಗಳೂರಿನಂತಹ ನಗರದಲ್ಲಿ ಅದು ಸುಲಭದ ಕೆಲಸ ಅಲ್ಲ. 

೨. ಬೆಂಗಳೂರಲ್ಲಿ ಪರರಾಜ್ಯಗಳ ವಲಸಿಗರು ಜಾಸ್ತಿ. ಅವರಲ್ಲೂ ಅನೇಕರು ಪಾಸ್ ಪೋರ್ಟ್, ಪಡಿತರ ಮುಂತಾದ ಬೇರೆ ಬೇರೆ ಕಾರಣಗಳಿಗಷ್ಟೆ ಮತದಾರದ ಪಟ್ಟಿಗೆ ಹೆಸರು ಸೇರಿಸಿಕೊಂಡರೂ ಅವರಿಗೆ ಇಲ್ಲಿನ ರಾಜಕೀಯ, ಅಭ್ಯರ್ಥಿಗಳ ಬಗ್ಗೆ ಏನೂ ಗೊತ್ತಿರದ ಕಾರಣ ಮತದಾನಕ್ಕೆ ಹೋಗದೇ ಇರುವವರು ಹೆಚ್ಚಿರಬಹುದು. ಹಲವರು ಇಲ್ಲೇ ನೆಲೆಯೂರಿ ಬಹಳ ವರ್ಷಗಳಾಗಿದ್ದರೂ ಹೊರಗಿನವರಂತೆಯೇ ಇದ್ದು ಮತದಾನಕ್ಕೆ ಆಸಕ್ತಿ ಹೊಂದಿರುವುದಿಲ್ಲ.  

೩. ಇಲ್ಲಿನ ಬಹುತೇಕ ಯುವಜನಾಂಗಕ್ಕೆ ರಾಜಕೀಯ ಪ್ರಜ್ಞೆ ಕಡಿಮೆ.  ಬಹಳ ಮಕ್ಕಳಿಗೆ ರಾಜಕೀಯ, ಆಡಳಿತ, ಚುನಾವಣೆ ಬಗ್ಗೆ, ಅಧಿಕಾರದಲ್ಲಿರುವ ವ್ಯಕ್ತಿಗಳ ಬಗ್ಗೆ ಮಾಹಿತಿಯೇ ಗೊತ್ತಿರುವುದಿಲ್ಲ.  ಇಂತಹವರಲ್ಲಿ ಬಹಳಷ್ಟು ಜನ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಂಡರೂ ಮನೆಯಲ್ಲಿ ಯಾರೂ ಹೇಳದಿದ್ದರೆ ಮತದಾನಕ್ಕೆ ಹೋಗದಿರಬಹುದು.  

೪. ಓಡಾಟದ ಕೆಲಸದಲ್ಲಿರುವವರು, ರಾತ್ರಿಪಾಳಿಯವರು ಹಲವು ಜನ ಮತದಾನ ತಪ್ಪಿಸಿಕೊಳ್ಳಬಹುದು. ಅಂತಹ ಉದ್ಯೋಗಿಗಳು ನಗರಗಳಲ್ಲಿ ಗಣನೀಯ ಸಂಖ್ಯೆಯಲ್ಲಿರುತ್ತಾರೆ. ಹಲವರು ವಿದೇಶಕ್ಕೆ ಹೋಗಿರುತ್ತಾರೆ.

೫. ಹಿರಿಯನಾಗರಿಕರು ನಿರಾಸಕ್ತಿ ಹೊಂದಿರಬಹುದು. "ಯಾವ್ ಪಕ್ಷ ಬಂದ್ರೂ ಅಷ್ಟೇ ಬಿಡ್ರಿ. ಏನಾದ್ರೂ ಮಾಡ್ಕಳ್ಲಿ.." ಅನ್ನೋದು ಸಾಮಾನ್ಯ. ಆದರೆ ಬೇರೆ ಊರುಗಳಲ್ಲಿ ಮುದುಕರು ಹುಡುಗರು ಎಲ್ಲರೂ ಎದ್ದುಬಂದು ಓಟ್ ಮಾಡೋದಿದೆ. ಕಾರಣ ಹಲವಿರಬಹುದು.

೬. ಇದಿಷ್ಟೂ ಕಾರಣಗಳ ಹೊರತಾಗಿಯೂ ನಿಜವಾಗಿಯೂ ನಗರದಲ್ಲಿ ಮತದಾನದ ಬಗ್ಗೆ ನಿರಾಸಕ್ತಿ ಇರುವವರ, ಅದರ ಮಹತ್ವವನ್ನು ತಿಳಿಯದವರ, ನಿರ್ಲಕ್ಷ್ಯ ಮಾಡುವವರ, ಆ ಪ್ರಜ್ಞೆ ಇರದವರ ಸಂಖ್ಯೆ ಗಣನೀಯವಾಗಿದೆ.  ವಾರಾಂತ್ಯದಲ್ಲಿ ಮತದಾನದ ದಿನ ಬಂದಾಗ ಹಲವರು ಪ್ರವಾಸ ಹೋಗಿಬಿಡುತ್ತಾರೆ ಎಂಬ ಆರೋಪವು ಈ ಅಂಶದಲ್ಲಿ ಸೇರುತ್ತದೆ. ಈ ಬಾರಿಯ ಮತದಾನವು ಶುಕ್ರವಾರ ಬಂದಿತ್ತು. ಹಾಗಾಗಿ ಮೂರು ದಿನ ರಜೆ ಸಿಗುವಂತಾಗಿತ್ತು.  ಇದನ್ನು ತಪ್ಪಿಸಲು ಹೋಂಸ್ಟೇ , ರೆಸಾರ್ಟುಗಳಲ್ಲಿ ಬುಕಿಂಗ್ ತೆಗೆದುಕೊಳ್ಳದಂತೆ ಜಿಲ್ಲಾಡಳಿತಗಳು ನಿರ್‍ದೇಶನ ಕೊಟ್ಟಿದ್ದವು ಎಂದು ವರದಿಯಾಗಿತ್ತು. ಅದು ಪಾಲನೆ ಆಯಿತೊ ಇಲ್ಲವೊ ಗೊತ್ತಿಲ್ಲ.

ಆದರೆ ಮುಖ್ಯಕಾರಣ ಮೇಲೆ ಹೇಳಿರುವ ಅಂಶಗಳಲ್ಲಿ ಮೊದಲನೆಯದ್ದೇ ಆಗಿದೆ ಅಂತ ನನ್ನ ಅನಿಸಿಕೆ.

ಭಾನುವಾರ, ಜುಲೈ 2, 2023

ಐಫೋನ್'ಗಾಗಿ ಕನ್ನಡ ಕೀಬೋರ್ಡ್ ಆಪ್‌ಗಳು

ಐಫೋನ್/ಐಪ್ಯಾಡಲ್ಲಿ ಕನ್ನಡದಲ್ಲಿ ಬರೆಯಲು ಇನ್ ಬಿಲ್ಟ್ ಕೀಬೋರ್‍ಡ್ ಇದೆ. ಆದರೆ ಅದು ಅಷ್ಟು ಅನುಕೂಲವಾಗಿಲ್ಲ ಅನ್ನಿಸುವವರಿಗೆ ಬೇರೆ ಹಲವಾರು ಆಯ್ಕೆ ಇವೆ. ಅವುಗಳಲ್ಲಿ ಕೆಲವು ಆ‌ಪ್ ಗಳು ಬಳಕೆಗೆ ಸುಲಭವಾಗಿವೆ ಅಂತ ಅವುಗಳನ್ನು ಬಳಸುತ್ತಿರುವ ಐಫೋನಿಗರು ಹೇಳುತ್ತಾರೆ. ಹಾಗೆ ಶಿಫಾರಸ್ಸು ಮಾಡಲ್ಪಟ್ಟ ಕೆಲ ಆಪ್ ಗಳು ಚಿತ್ರದಲ್ಲಿವೆ.



ಶನಿವಾರ, ಫೆಬ್ರವರಿ 4, 2023

ವಿಕಿ ಸಮ್ಮಿಲನ ೨೦೨೩, ಉಡುಪಿ

 

Wikimedia FoundationWikimedia logo family complete-2022
CC BY-SA 3.0
ಆನ್ ಲೈನ್ ಜಗತ್ತಿನಲ್ಲಿ ಬಹುತೇಕರಿಗೆ ಗೊತ್ತಿರುವ ವಿಕಿಪೀಡಿಯಾ ಎನ್ನುವುದು ಒಂದು ಮುಕ್ತಜ್ಞಾನದ ಮಾಹಿತಿ ತಾಣ. ಇದರ ವಿಶೇಷ ಎಂದರೆ ಇದು ಜನಸಮುದಾಯದಿಂದಲೇ ನಡೆಯಲ್ಪಡುವುದು. ಅಂದರೆ ಇದರಲ್ಲಿ ಮಾಹಿತಿ ತುಂಬಿಸಲು ಮತ್ತು ಮಾಹಿತಿ ಪಡೆಯಲು ಎಲ್ಲರಿಗೂ ಮುಕ್ತ ಅವಕಾಶವಿರುತ್ತದೆ. ಇದು ಜಗತ್ತಿನ ಹಲವಾರು ಭಾಷೆಗಳಲ್ಲಿದ್ದು ಕನ್ನಡದಲ್ಲೂ ಸಹ ಸಕ್ರಿಯವಾಗಿದೆ.  ವಿಕಿಪೀಡಿಯಾ ಅನ್ನುವುದು ಒಂದು ಯೋಜನೆಯಾಗಿದ್ದು ಇದೇ ರೀತಿ ವಿಕಿಸೋರ್‍ಸ್, ವಿಕಿಕೋಟ್ಸ್, ವಿಕ್ಷನರಿ, ವಿಕಿಡೇಟಾ, ವಿಕಿ ಕಾಮನ್ಸ್ .. ಹೀಗೆ ಹಲವಾರು ಯೋಜನೆಗಳು ವಿವಿಧ ಭಾಷೆಗಳಲ್ಲಿ ಮುಕ್ತಜ್ಞಾನ ಮತ್ತು ಮುಕ್ತಮಾಹಿತಿಯ ಉದ್ದೇಶದಿಂದ ನಡೆಯಲ್ಪಡುತ್ತಿವೆ. ಇವೆಲ್ಲವನ್ನು ಸೇರಿ 'ವಿಕಿಮೀಡಿಯ' ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಈ ಯೋಜನೆಗಳಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುತ್ತಾ ಕೊಡುಗೆ ನೀಡುತ್ತಿರುವವರನ್ನು ವಿಕಿಮೀಡಿಯನ್ಸ್ (ವಿಕಿಮೀಡಿಯನ್ನರು) ಎನ್ನಲಾಗುತ್ತದೆ.

ವಿಕಿಮೀಡಿಯನ್ ಸಮುದಾಯ ಆಗಾಗ ಭೇಟಿಯಾಗುವುದು ವಾಡಿಕೆ. ಸಾಮಾನ್ಯವಾಗಿ ಒಂದಿಷ್ಟು ಸಕ್ರಿಯ ವಿಕಿಮೀಡಿಯನ್ನರು ಒಂದೆಡೆ ಸೇರಿ ಆ ಯೋಜನೆಗಳ ಬಗ್ಗೆ ಚರ್‍ಚಿಸುವುದು, ಸಮುದಾಯವನ್ನು ಬೆಳೆಸುವ ಬಗ್ಗೆ ಕಾರ್‍ಯಯೋಜನೆ ರೂಪಿಸುವುದು, ಪರಸ್ಪರ ಮಾಹಿತಿ ವಿನಿಮಯ, ತರಬೇತಿ, ಕಾರ್‍ಯಾಗಾರಗಳು ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ಭೇಟಿಯಾಗುವ ಅಭ್ಯಾಸವಿದೆ. ಆಯಾ ಭಾಷಾ ಸಮುದಾಯಗಳು ಅಥವಾ ನಿರ್‍ದಿಷ್ಟ ಕಾರ್‍ಯಯೋಜನೆಗಳಲ್ಲಿ ಕೊಡುಗೆ ನೀಡುತ್ತಿರುವ ಬಳಕೆದಾರರ ಗುಂಪುಗಳು ಕೂಡ ಉದ್ದೇಶಿತ ಕೆಲಸಗಳಿಗಾಗಿ ಭೇಟಿಯಾಗುತ್ತವೆ.  

ಈಗೊಂದು ಎರಡ್ಮೂರು ವರ್‍ಷಗಳಿಂದ ಕೋವಿಡ್ ಮುಂತಾದ ಕಾರಣಗಳಿಂದ  ಭೌತಿಕ ಭೇಟಿ ಸಾಧ್ಯವಾಗದೇ ಹೋಗಿತ್ತು. ಈ ಸಂದರ್‍ಭದಲ್ಲಿ ಮೂರ್‍ನಾಲ್ಕು ಬಾರಿ ಆನ್ ಲೈನ್ ಸಭೆಗಳನ್ನು ನಡೆಸಿದ್ದೆವು.  ಆ ಸಭೆಯಲ್ಲಿ ಚರ್‍ಚಿಸಿದಂತೆ ಈ ಬಾರಿ ಒಂದು ಭೌತಿಕ ಸಮ್ಮಿಲನವನ್ನು  ಉಡುಪಿಯಲ್ಲಿ ನಡೆಸುವುದು ಎಂದು ತೀರ್‍ಮಾನವಾಯಿತು.  

PavanajaKannada Wiki Sammilana 2023 Udupi 02CC BY-SA 4.0
ಜನವರಿ ೨೩ರಂದು ಉಡುಪಿಯ ಜಿ. ಶಂಕರ್ ಮಹಿಳಾ ಸರ್‍ಕಾರಿ ಕಾಲೇಜಿನ ಸಭಾಂಗಣದಲ್ಲಿ ಒಂದು
ದಿನದ ಸಮ್ಮಿಲನವನ್ನು ನಡೆಸಿದೆವು. ಬೆಳಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ನಡೆದ ಈ ಸಮ್ಮಿಲನ ಕಾರ್‍ಯಕ್ರಮವನ್ನು ಉದ್ಘಾಟಿಸಿದವರು ನಾಡೋಜ ಕೆ.ಪಿ.ರಾವ್ ಅವರು. 

ಅನಂತರ ಹಲವು ವಿಕಿಮೀಡಿಯನ್ನರಿಂದ ಹಲವು ವಿಷಯಗಳ ಬಗ್ಗೆ ಸೆಮಿನಾರ್, ಪ್ರೆಸೆಂಟೇಶನ್ ಗಳು ನಡೆದವು. ವಿಕಿಮೀಡಿಯ ಕ್ವಿಜ್ ನಡೆಸಲಾಯಿತು, ಮಾಹಿತಿ ವಿನಿಮಯ ಚರ್ಚೆಗಳು ನಡೆದವು. ಬೇರೆ ಬೇರೆ ಊರುಗಳಿಂದ , ಹೆಚ್ಚಾಗಿ ಕರಾವಳಿಯ ಊರುಗಳಿಂದ ಹಲವು ಹಳೆ ಹೊಸ ವಿಕಿಮೀಡಿಯನ್ನರು ಪಾಲ್ಗೊಂಡಿದ್ದ ಈ ಸಮ್ಮಿಲನವು ಬಹಳ ದಿನಗಳ ನಂತರ ಪರಸ್ಪರ ಭೇಟಿಯಾಗುವ ಅವಕಾಶ ಕಲ್ಪಿಸಿತು.  ಡಾ. ಯು.ಬಿ. ಪವನಜರ ಮಾರ್‍ಗದರ್ಶನದಲ್ಲಿ ವಿಕಿ ಇ-ಲರ್ನಿಂಗ್ ಸರ್ಟಿಫಿಕೇಟ್ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿನಿಯರು ಸಭಾಂಗಣದ ತಯಾರಿಯನ್ನು ಚೆನ್ನಾಗಿ ಮಾಡಿ ಚಟುವಟಿಕೆಯಿಂದ ಪಾಲ್ಗೊಂಡರು.

ಕಾರ್‍ಯಕ್ರಮದ ವಿವರಗಳು: ವಿಕಿಪೀಡಿಯ ಪುಟದಲ್ಲಿ - 

ವಿಕಿಪೀಡಿಯ:ಸಮ್ಮಿಲನ/ವಿಕಿ ಸಮ್ಮಿಲನ ೨೦೨೩, ಉಡುಪಿ

PavanajaKannada Wiki Sammilana 2023 Udupi 65CC BY-SA 4.0


ಸಂಜೆ ನಾವೊಂದಿಷ್ಟು ಗೆಳೆಯರು ಉಡುಪಿ ಸಮೀಪದ ಮಟ್ಟು, ಪಡುಕೆರೆ ಕಡಲತೀರಕ್ಕೆ ಭೇಟಿ ಕೊಟ್ಟು ಚೆಲುವಿನ ಸೂರ್‍ಯಾಸ್ತವನ್ನು ಅನುಭವಿಸಿದೆವು.
ಮಟ್ಟು - ಪಡುಕೆರೆ ಬೀಚ್ ರಸ್ತೆ , ಉಡುಪಿ

ಮಟ್ಟು - ಪಡುಕೆರೆ ಬೀಚ್ , ಉಡುಪಿ




ಶನಿವಾರ, ಆಗಸ್ಟ್ 6, 2022

'ರಾಕೆಟ್ರಿ - ದ ನಂಬಿ ಎಫೆಕ್ಟ್'

ದೇಶ ಹೆಮ್ಮೆಪಡುವಂತಹ ವಿಜ್ಞಾನಿಯನ್ನೂ ಕ್ಷುಲ್ಲಕ ರಾಜಕೀಯಕ್ಕಾಗಿ, ಯಾವುದೋ ಕಾಣದ ಕೈಗಳ ಪಿತೂರಿಗಾಗಿ ಬಲಿಮಾಡಿ ಅವರ ಜೀವನವನ್ನೇ ಹಾಳುಮಾಡಿದ್ದಲ್ಲದೇ ದೇಶಕ್ಕೂ ದೊಡ್ಡ ನಷ್ಟವಾಗುವಂತೆ ಮಾಡುವ ದುಃಸ್ಥಿತಿಗಿಳಿದಿದ್ದು ನಮ್ಮ ಸಮಾಜದ‌, ಆಡಳಿತ ವ್ಯವಸ್ಥೆಯ ಅಧೋಗತಿ. ಬರೀ ನೆಗೆಟಿವ್ ಸುದ್ದಿಗಳನ್ನೇ ಮೆರೆದಾಡಿಸುವ ಮಾಧ್ಯಮಗಳ ಈ ಕಾಲದಲ್ಲಿ‌ ಈ ಸಿನೆಮಾ ಕಾರಣದಿಂದಾದರೂ ಅವರ ಸಾಧನೆ ಬಗ್ಗೆ ಒಂದಿಷ್ಟು ಜನ ತಿಳಿದುಕೊಂಡು ಹೆಮ್ಮೆಪಡುವಂತೆ ಆಯಿತಲ್ಲ‌, ಅದೇ ಈ ಸಿನೆಮಾದ ಸಾರ್ಥಕತೆ. "ನಂಬಿ ನಾರಾಯಣನ್" ಅಂತ ಗೂಗಲ್ಲಲ್ಲಿ ಹುಡುಕಿದರೆ ಬರುವ ಹೆಚ್ಚಿನ ಸುದ್ದಿಕೊಂಡಿಗಳು ಬರೀ ಅವರ ಸ್ಪೈ ಕೇಸಿಗೆ ಸಂಬಂಧಿಸಿದ್ದು. ಇಸ್ರೋದ ಉನ್ನತ ವಿಜ್ಞಾನಿಯಾಗಿ ರಾಕೆಟ್ ಎಂಜಿನ್ನುಗಳ ತಯಾರಿಕೆಯಲ್ಲಿ ಭಾರತವನ್ನು ಇನ್ನೂ ಸಶಕ್ತಗೊಳಿಸಿದ ವ್ಯಕ್ತಿಯನ್ನು ಸುಳ್ಳು‌ ದೇಶದ್ರೋಹದ ಕೇಸಿನಲ್ಲಿ ಸಿಲುಕಿಸಿ ಜೈಲು ಸೇರಿಸಿದ್ದಲ್ಲದೆ ಅವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸಿದ್ದು ಅಕ್ಷಮ್ಯ. ನಾಸಾದ ಅವಕಾಶವನ್ನೇ ತಿರಸ್ಕರಿಸಿ ಭಾರತವನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ವಾವಲಂಬಿ ಮಾಡಲು ಕೆಲಸ ಮಾಡಿದ ವ್ಯಕ್ತಿಯನ್ನು ಪಾಕಿಸ್ತಾನಕ್ಕೆ ತಂತ್ರಜ್ಞಾನ ಮಾರಿದ್ದಾರೆಂಬ ಆರೋಪ ಹೊರಿಸಿ ಕೆಳಗೆಳೆದುಹಾಕಿದ್ದು ದೊಡ್ಡ ದುರಂತ. 


 
'ರಾಕೆಟ್ರಿ - ದ ನಂಬಿ ಎಫೆಕ್ಟ್' : ಈ ಸಿನೆಮಾ ಇವೆಲ್ಲವನ್ನು ಅನಾವರಣಗೊಳಿಸಿಟ್ಟಿದೆ‌. ಸಿನೆಮಾ ಕೊನೆಯಲ್ಲಿ ಉಸಿರುಭಾರವಾಗುವ ಜೊತೆಗೆ ನಂಬಿನಾರಾಯಣರ ಕಣ್ಣಿನಲ್ಲಿ ಈಗಲೂ ಕಾಣುವ ಆ ನೋವು ನಮ್ಮದೂ ಆಗಿಬಿಡುತ್ತದೆ. ಅಗತ್ಯದ ಒಂದಿಷ್ಟು ಸನ್ನಿವೇಶಗಳಲ್ಲಿ ತಕ್ಕ ಹಿನ್ನೆಲೆ ಶಬ್ದ/ಸಂಗೀತ ವರ್ಕೌಟ್ ಮಾಡಿದ್ದರೆ ಸಿನೆಮಾ ಇನ್ನೂ ತಾಗಬಹುದಿತ್ತು ಅನಿಸಿತು. ಇರಲಿ, ಅದರಲ್ಲಿನ ವಿಷಯದ ಗಂಭೀರತೆಯ ಮುಂದೆ ಅದೇನು ದೊಡ್ಡದಲ್ಲ.  ಸಿನೆಮಾ ಅಮೇಜಾನ್ ಪ್ರೈಮ್ ನಲ್ಲಿ ಇದೆ, ಕನ್ನಡದ ಆಡಿಯೊ ಫೀಡ್ ಕೂಡ ಇದೆ.

ನಂಬಿನಾರಾಯಣರೆ, ಈ ದೇಶವನ್ನು ಕ್ಷಮಿಸಿಬಿಡಿ.

ಶನಿವಾರ, ಏಪ್ರಿಲ್ 23, 2022

'ಪದ' ತಂತ್ರಾಂಶ - ಹೊಸ ಆವೃತ್ತಿ ಪರಿಚಯ

ನಾನು ಮೊದಲಿಂದ ಕಂಪ್ಯೂಟರಲ್ಲಿ ಕನ್ನಡ ಬರೆಯಲು ಬಳಸುತ್ತಿದ್ದುದು 'ಬರಹ' ತಂತ್ರಾಂಶ. ಹಲವು ವರ್‍ಷಗಳ ಕಾಲ ಯಾವ ತೊಂದರೆಯಿಲ್ಲದೆ 'ಬರಹ' ಬಳಸಿದ್ದೆ. ಮೊದಲು ಉಚಿತವಾಗಿದ್ದ 'ಬರಹ'ವು ಆನಂತರ ಪಾವತಿ ಮಾಡಿ ಬಳಸಬೇಕಾಯ್ತು. ನಾನು ಅದರ ಲೈಸೆನ್ಸ್ ಕೊಂಡುಕೊಂಡು ಬಳಸುತ್ತಿದ್ದೆ. ಆ ಲೈಸೆನ್ಸ್ ಒಂದು ಬಾರಿಗೆ ಒಂದು ಕಂಪ್ಯೂಟರಲ್ಲಿ ಮಾತ್ರ ಬಳಸಲು ಅವಕಾಶವಿದ್ದುದರಿಂದ ನನ್ನ ವೈಯಕ್ತಿಕ ಗಣಕದಲ್ಲಿ  ಮಾತ್ರ ಅದನ್ನು ಬಳಸಲು ಸಾಧ್ಯವಾಗುತ್ತಿತ್ತು.  ಈ ನಡುವೆ 'ಪದ' ತಂತ್ರಾಂಶವು ಹಲವು ಒಳ್ಳೊಳ್ಳೆಯ ಸೌಲಭ್ಯಗಳನ್ನು ಹೊಂದಿ ಬಿಡುಗಡೆಯಾಗಿ ತ್ತು. ಮುಖ್ಯವಾಗಿ ಅದರಲ್ಲಿ ಪೋರ್‍ಟೆಬಲ್ ಆವೃತ್ತಿ ಇದ್ದುದರಿಂದ ಒಂದು ಪೆನ್ ಡ್ರೈವಲ್ಲಿ ಹಾಕಿಟ್ಟುಕೊಂಡು ಎಲ್ಲಿ ಬೇಕಾದರಲ್ಲಿ ಬಳಸುವ ಮತ್ತು ಡೌನ್ಲೋಡ್ ಮಾಡಿಟ್ಟುಕೊಂಡರೆ ಇನ್ ಸ್ಟಾಲೇಶನ್ ಮಾಡುವ ಅಗತ್ಯವಿಲ್ಲದೆ ಅಡ್ಮಿನ್ ರೈಟ್ಸ್ ಇಲ್ಲದೆಡೆಯೂ ಬಳಸಬಹುದಾಗಿದ್ದರಿಂದ ಅನುಕೂಲಕರವಾಗಿತ್ತು.  ಹಾಗಾಗಿ 'ಪದ' ತಂತ್ರಾಂಶವನ್ನು ಬಹುತೇಕ ಬಳಸುತ್ತಿದ್ದೇನೆ.  ಈ ನಡುವೆ ಪದ ತಂತ್ರಾಂಶದ ಹೊಸ ಆವೃತ್ತಿ ಜನವರಿ ೨೦೨೨ರಲ್ಲಿ ಬಿಡುಗಡೆಯಾಯಿತು.  ಆಗ ಬರೆದ ಒಂದು ಚಿಕ್ಕ ಪರಿಚಯ ಈ ಕೆಳಗಿನಂತಿದೆ:


ಹಲವಾರು ಹೊಸ ಸೌಲಭ್ಯಗಳೊಂದಿಗೆ 'ಪದ' ತಂತ್ರಾಂಶದ ಹೊಸ ಆವೃತ್ತಿ ಬಿಡುಗಡೆಯಾಗಿದೆ. ಕಂಪ್ಯೂಟರಲ್ಲಿ ನೇರ ಕನ್ನಡ ಟೈಪಿಂಗ್ ಮತ್ತು ವರ್ಡ್ ಪ್ರೊಸೆಸಿಂಗ್ ಮಾಡಲು ಬಳಸಲಾಗುವ ಈ ತಂತ್ರಾಂಶದ ಈ ಆವೃತ್ತಿಯಲ್ಲಿ ಅಳವಡಿಸಲಾಗಿರುವ ಕೆಲ ಹೊಸ ಸೌಲಭ್ಯಗಳೆಂದರೆ,

೧. ಇನ್ ಸ್ಕ್ರಿಪ್ಟ್ ಕೀಬೋರ್ಡ್ ಲೇ ಔಟ್

೨. IMEಯಲ್ಲೇ ಯುನಿಕೋಡ್ ಮತ್ತು ANSI ಟೈಪಿಂಗ್ ಆಯ್ಕೆ (ಗ್ರಾಫಿಕ್ ಡಿಸೈನಿಂಗ್, ಡಿಟಿಪಿ ಮುಂತಾದೆಡೆ ಇನ್ನೂ ಹಳೆಯ ಫಾಂಟುಗಳೇ ಬೇಕೆಂಬಲ್ಲಿ)

೩. ನೇರವಾಗಿ IMEಯಲ್ಲೇ ಆನ್ಸಿ ಟು ಯುನಿಕೋಡ್ ಪಠ್ಯಪರಿವರ್ತನೆ.

೪. ಆನ್ಸಿ (ಉದಾ: ಹಳೆ ನುಡಿಯಲ್ಲಿ ಬರೆದ) ಫೈಲುಗಳನ್ನು ಒಟ್ಟಿಗೇ ಯುನಿಕೋಡ್ ಗೆ ಪರಿವರ್ತಿಸುವುದು.

೫. ಟೈಪಿಂಗ್ ಕಲಿಕೆಗೆ ಟ್ಯೂಟರ್ 

ಮತ್ತು ಇನ್ನೂ ಹಲವು ಸುಧಾರಣೆಗಳು ಮತ್ತು ಬಗ್ ಫಿಕ್ಸ್

ಪೋರ್ಟೆಬಲ್ ಆವೃತ್ತಿಯ ವಿಶೇಷವೆಂದರೆ ಇದನ್ನು ಕಂಪ್ಯೂಟರಲ್ಲಿ ಇನ್ ಸ್ಟಾಲ್ ಮಾಡಿಕೊಳ್ಳುವ ಅಗತ್ಯವಿಲ್ಲ. ಡೌನ್ಲೋಡ್ ಮಾಡಿಟ್ಟುಕೊಂಡರೆ ಸಾಕು. ಅದರಲ್ಲೇ ತೆರೆದು ಬಳಸಬಹುದು. ಒಂದು ಪೆನ್ ಡ್ರೈವಲ್ಲಿ ಹಾಕಿಟ್ಟುಕೊಂಡರೆ ಯಾವ ಕಂಪ್ಯೂಟರಲ್ಲಾದರೂ  ನೇರವಾಗಿ ಬಳಸಿಕೊಳ್ಳಬಹುದು.  ಹಾಗಂತ ಇನ್ ಸ್ಟಾಲ್ ಮಾಡಿಕೊಳ್ಳುವ ಆವೃತ್ತಿ ಸಹ ಬೇಕಾದರೂ ಇದೆ. ವಿಂಡೋಸ್ & ಲೈನಕ್ಸ್ ಎರಡಕ್ಕೂ ಇದೆ.

ನುಡಿ (ಕೆಪಿ ರಾವ್), ಪೊನೆಟಿಕ್, ಟ್ರಾನ್ಸ್ಲಿಟೆರೇಶನ್ ಕೀಬೋರ್ಡ್ ಲೇ ಔಟುಗಳಿವೆ, ನೇರ ಪಿಡಿಎಫ್ ಕನ್ವರ್ಶನ್ ಮಾಡಬಹುದು, ವಿವಿಧ ಫಾಂಟುಗಳನ್ನು ಹಾಕಿಕೊಳ್ಳಬಹುದು, ಒಟ್ಟಾರೆ ಬಹುತೇಕ ಅಗತ್ಯಗಳಿಗೆ ಹೊಂದಿಕೆಯಾಗುವಂತಹ ಸೌಲಭ್ಯಗಳು ಈ ತಂತ್ರಾಂಶದಲ್ಲಿ ಇವೆ. ಯಾವ ತೊಂದರೆಯಿಲ್ಲದೆ ಎಲ್ಲೆಡೆ ಬಳಸಬಹುದು  ಎಂದು ಹಲವು ವರ್ಷಗಳಿಂದ ಇದರ ಬಳಕೆದಾರನಾಗಿದ್ದು ಹೇಳುತ್ತೇನೆ. ಈ ತಂತ್ರಾಂಶದ ಅಭಿವೃದ್ಧಿಗಾರರಾದ Lohit DS ಅವರಿಗೆ ಧನ್ಯವಾದಗಳು. ಪದ ಡೌನ್ಲೋಡ್ ಲಿಂಕ್ ಇಲ್ಲಿದೆ:  https://www.pada.pro/

******

ಯೂನಿಕೋಡ್ ನಿಯಮದ ಪ್ರಕಾರ ವ್ಯಂಜನಕ್ಕೆ 'ರ'ಕಾರ ಸೇರಿದಾಗ ಅರ್ಕಾವೊತ್ತು (‌‌೯) ಅನಿವಾರ್ಯ. ಅರ್ಕಾವೊತ್ತು ಇಲ್ಲದಂತೆ ಬರೆಯಲು zero width joiner ಮೂಲಕ ಅವಕಾಶ ಇದೆ. ಆದರೆ ಅದಕ್ಕಾಗಿ ಒಂದೊಂದು ತಂತ್ರಾಂಶದಲ್ಲಿ ಒಂದೊಂದು ರೀತಿ ಕೀ ಇರುವುದರಿಂದ ಟೈಪ್ ಮಾಡುವಾಗ ಕೊಂಚ ತೊಡಕಾಗಬಹುದು.

'ಪದ' ತಂತ್ರಾಂಶದ ಹೊಸ ಆವೃತ್ತಿಯ (5‌.x.6) IMEದಲ್ಲಿ ಆ ತೊಡಕನ್ನೂ ನೀಗಿಸಿ ನೇರವಾಗಿ ಅರ್‍ಕಾವೊತ್ತು ಇಲ್ಲದೇ ಅಥವಾ ಇಟ್ಟುಕೊಂಡು ಬರೆಯುವ ಸೌಲಭ್ಯ ಕೊಟ್ಟಿದ್ದಾರೆ. ಈಗ 'ಸೂರ್‍ಯ', 'ತೀರ್‍ಮಾನ', 'ರ್‍ಯಾಂಕ್' , 'ರ್‍ಯಾಲಿ' ಮುಂತಾದವು ನೇರವಾಗಿ ಬರೆಯಲು ಸಾಧ್ಯ. ಅರ್ಕಾವೊತ್ತು ಅನಿವಾ'ರ್‍ಯ'ವಲ್ಲ.

******

೨೦೧೨ ರಲ್ಲಿ 'ಪದ' ತಂತ್ರಾಂಶ ೪.೦ ಬಿಡುಗಡೆಯಾದಾಗ ಬರೆದಿದ್ದ ಬರಹ ಇಲ್ಲಿದೆ: 
ಪದ ತಂತ್ರಾಂಶ - Pada Software (Indic word processor & IME)